ಇಲ್ಲಿನ ರತ್ನವರ್ಮ ಕ್ರೀಡಾಂಗಣದ ತುಳುನಾಡ ಸಿರಿ ದೊಂಪದಲ್ಲಿ ರೂಪುಗೊಂಡಿರುವ ತುಳು ಗ್ರಾಮದಲ್ಲಿ ನಡೆಯುತ್ತಿರುವ ವಿಶ್ವ ತುಳು ಸಮ್ಮೇಳನ ತುಳುನಾಡಿನ ಸಾಂಪ್ರದಾಯಿಕತೆ, ತುಳುನಾಡಿನ ಖಾದ್ಯ, ಜೀವನ ಶೈಲಿಯ ಪೂರ್ಣ ಚಿತ್ರಣವನ್ನೇ ಕಣ್ಣೆದುರಿಗೆ ತಂದು ನಿಲ್ಲಿಸುವ ಮೂಲಕ ಇಲ್ಲಿಗೆ ಆಗಮಿಸಿದ ಸಾವಿರಾರು ಜನರಿಗೆ ಗತಕಾಲದ ನೆನಪನ್ನು ಕಟ್ಟಿಕೊಟ್ಟ ಸಂತಸ ಮೂಡಿಸಿದೆ.
ಇಲ್ಲಿನ ಅಟಿಲ್ದ ಅರಗಣೆ. ತುಳು ನಾಡಿನ ಅನಾದಿ ಕಾಲದ ಖಾದ್ಯಗಳನ್ನು ಇಂದಿನ ಜನತೆಗೆ ಪರಿಚಯಿಸುವ ಮಹತ್ತರವಾದ ಉದ್ದೇಶವನ್ನು ಇದು ಹೊಂದಿದೆ. ಅಟಿಲ್ದ ಅರಗಣೆಯ ಮುಂಭಾಗದಲ್ಲಿ ಹಿರಿಯ ಅಜ್ಜ-ಅಜ್ಜಿ ನಿಂತಿರುವ ಹಿರಿಯ ಪ್ರತಿಮೆ ಇದೆ. ಅದಕ್ಕೆ ತೊಡಿಸಲಾದ ಪಂಚೆ-ಸೀರೆ ಕೈಯ್ಯಲ್ಲಿರುವ ಅಜ್ಜನ ಕೊಡೆ, ಕಾಲ್ಗೆಜ್ಜೆ ಕಾಲುಂಗುರ ಕಣ್ಮನ ಸೆಳೆಯುತ್ತದೆ. ಇವೆರಡೂ ಪ್ರತಿಮೆಗಳು ಅಚ್ಚ ತುಳು ನಾಡಿನ ಸಂಸ್ಕೃತಿಯನ್ನು ಬಿಂಬಿಸುವಂತಿದೆ.
ಅದರ ಒಳ ಹೊಕ್ಕಾಗ ಪುರಾತನ ಕಾಲದ ಪ್ರಪಂಚವೊಂದರ ಒಳಹೊಕ್ಕಂತಾಗುತ್ತದೆ. ಉಪಹಾರ ಸ್ವೀಕರಿಸುವುದಕ್ಕಾಗಿ ಐದು ರೂ.ಗಳ ಕೂಪನ್ ಅನ್ನು ಖರೀದಿಸಬೇಕು. ಒಂದು ಕೂಪನ್ ಒಂದು ತಿಂಡಿಗೆ ಮಾತ್ರ ಸೀಮಿತ. ತುಳುನಾಡಿನ ಎಲ್ಲಾ ವಿಧದ ಖಾದ್ಯಗಳನ್ನು ಇಲ್ಲಿ ನೋಡುವ ಅವಕಾಶವಿದೆ. ಹಲವಾರು ಸ್ವಸಹಾಯ ಗುಂಪು ಮತ್ತು ಸಂಘಗಳ ಸದಸ್ಯರು ತಾವು ಮಾಡಿರುವ ತಿಂಡಿ ತಿನಿಸುಗಳನ್ನು ಅಲ್ಲಿ ಪ್ರದರ್ಶನಕ್ಕಿಟ್ಟಿದ್ದಾರೆ.
ಕೂತು ತಿನ್ನಲು, ಕಟ್ಟೆ-ಬೆಂಚ್: ಅಟಿಲ್ದ ಅರಗಣೆಯೊಳಗೆ ಪ್ರವೇಶಿಸಿದಾಗ ತೆಂಗಿನ ಮರಗಳ ನಡುವಿನ ತಂಪಿನ ವಾತಾವರಣ ಮನಸೂರೆಗೊಳಿಸುತ್ತದೆ. ತೆಂಗಿನ ಮರಗಳಿಗೆ ಕಟ್ಟಲಾದ ಕಟ್ಟೆ, ಮರದ ಬೆಂಚ್ ನೋಡುವಾಗ ಹಳ್ಳಿಗಳಲ್ಲಿ ಕಂಡು ಬರುವ ಅಂಗಡಿಗಳ ನೆನಪಾಗುತ್ತದೆ. ಅಡಿಕೆಯ ಹಾಳೆಗೆ ಒಂದು ರೂ. ಕೊಟ್ಟು ಖರೀದಿಸಬೇಕು. ಅದರಲ್ಲಿ ಅಥವಾ ಅಲ್ಲೇ ಕೊಡು ಬಾಳೆ ಎಲೆಯಲ್ಲಿ ತಿಂಡಿ ತಿಂದ ಬಳಿಕ ಕಸದ ತೊಟ್ಟಿಯಲ್ಲಿ ಅದನ್ನು ಹಾಕಲು ವ್ಯವಸ್ಥೆ ಕಲ್ಪಿಸಲಾಗಿದೆ.
ಇದು ಇಲ್ಲಿನ ವಿಶೇಷ: ಕಟ್ ಮಂಡಿಗೆ, ಸುಕರುಂಡೆ, ರಾಗಿಯ ಪಾಯಸ, ಪೇರಡ್ಯೆ, ಮಣರೋ, ಗೋಧಿ ಅಪ್ಪ, ಅಕ್ಕಿ ಅಪ್ಪ, ನೇಂದ್ರ ಬಾಳೆ ತಿಂಡಿ, ಗೋಧಿ ಲಾಡು, ಅಕ್ಕಿ ಪಾಯಸ, ಅಕ್ಕಿ ಹುಡಿ, ತೆಂಗಿನ ಕಾಯಿ ಹೋಳಿಗೆ, ಸಿಹಿ-ಖಾರ ಗುಳಿಯಪ್ಪ, ಗೋಳಿಬಜೆ, ನೆಸಲೆಯ ತಿಂಡಿ, ಎಳ್ಳಿನ ಪಾನಕ, ಅಕ್ಕಿಯ ಮನಾರ, ಖಾರ ಮನಾರ, ನೆನೆ ಅಕ್ಕಿ, ಪತ್ರೊಡೆ. ಬಾಳೆ ಎಲೆ ತಿಂಡಿ, ನೀರು ದೋಸೆ, ಉದ್ದಿನ ದೋಸೆ, ಹಲಸಿನ ಕಾಯಿ ಹಪ್ಪಳ, ತೆಂಗಿನ ಕಾಯಿ ಹಪ್ಪಳ, ರವೆ ಲಾಡು, ಅಕ್ಕಿ ರೊಟ್ಟಿ, ತೆಂಗಿನ ಕಾಯಿ ಬರ್ಫಿ, ಹಯಗ್ರೀವ, ಕಡ್ಲೆ ಅವಲಕ್ಕಿ, ಸಿಹಿ-ಸಪ್ಪೆ-ಖಾರ ಉದ್ದಿನ ತಿಂಡಿ, ಉಂಡ್ಲುಗ, ಗೆಂಡದ ಅಡ್ಯೆ, ಕಾಯಿ ಪುಂಡಿ, ಬಾಣಲೆದ ಅಡ್ಯೆ, ಪದ್ದೊಲ್ಡಿ, ಅರಶಿನ ಎಲೆಯ ತಿಂಡಿ, ನೆಯ್ಯಪ್ಪ, ಬಟಾಟೆ ಗಸಿ, ಬಟಾಣಿ ಗಸಿ, ಚರುಂಬುರಿ, ಓಡಿನ ದೋಸೆ, ಮಸಾಲೆ-ಖಾರ-ಕಡ್ಲೆ, ಸಿಹಿ ಅವಲಕ್ಕಿ, ಮುಷ್ಠಿ ಕಡುಬು, ಉದ್ದಿನ ಚಟ್ನಿ, ಸೇಮೆ ಅಡ್ಯೆ, ಬೆಲ್ಲದ ರಸಾಯನ, ಬಿತ್ತ್ ಕಜಿಪು ಇತ್ಯಾದಿ ತಿಂಡಿಗಳು ಇಲ್ಲಿನ ವಿಶೇಷತೆಯಾಗಿದೆ.
ಅಷ್ಟೇ ಅಲ್ಲ ತುಳುನಾಡಿನ ಪಾನೀಯಗಳೂ ಅಲ್ಲಿ ತುಳುವರ ದಾಹ ತಣಿಸುತ್ತಿದ್ದವು. ಜೀರಿಗೆ-ಕೊತ್ತಂಬರಿ ಕಷಾಯ, ಬೇಂಗ ಕೆತ್ತೆಯ ಕಷಾಯ, ಪುನರ್ಪುಳಿ, ಲಿಂಬೆ ಶರಬತ್, ಎಳ್ಳು ಜ್ಯೂಸ್, ಚಹಾ ಕಾಫಿ ಅಲ್ಲಿತ್ತು. ಬೆಳಿಗ್ಗೆ ಒಂದು ಬಗೆಯ ತಿಂಡಿ ಅಲ್ಲಿದ್ದರೆ ಮಧ್ಯಾಹ್ನದ ಹೊತ್ತು ಬೇರೆಯೇ ತಿಂಡಿ ತಿನಿಸುಗಳು ಅಲ್ಲಿ ಘಮಘಮಿಸುತ್ತಿತ್ತು. ವೈವಿಧ್ಯತೆ ಎದ್ದು ಕಾಣುತ್ತಿತ್ತು.
ಪ್ರಾತ್ಯಕ್ಷಿಕೆ: ತಿಂಡಿ ತಿನಿಸುಗಳನ್ನು ಸವಿಯುವುದಲ್ಲದೇ, ಅವುಗಳನ್ನು ಮಾಡುವ ವಿಧಾನಗಳನ್ನೂ ಅಲ್ಲಿ ತೋರಿಸಲಾಗುತ್ತಿತ್ತು. ವಿಶೇಷವಾದ ತಿಂಡಿ ಮನೋರಳಿ ಮಾಡುವ ವಿಧಾನವಂತೂ ಸೂಪರ್! ಮಳಿಗೆಗಳಲ್ಲಿರುವ ಮಾರಾಟಗಾರರ ಸಂಯಮದ ವಿವರಣೆ ಎದ್ದು ಕಾಣುತ್ತಿತ್ತು. ಪಾಕ ಪ್ರೇಮಿಗಳು ತಿನಿಸುಗಳನ್ನು ಸವಿದು ಖುಷಿ ಪಟ್ಟರು.
ಗತ ಕಾಲದ ನೆನಪು: ಈಗ ತುಳುವರ ಮನೆಯಲ್ಲೂ ಕಾಣ ಸಿಗದ ತಿನಿಸುಗಳು ಅಲ್ಲಿದ್ದವು. ಇಲ್ಲಿನ ತಿಂಡಿ-ತಿನಿಸುಗಳನ್ನು ನೋಡುವಾಗ ನಮ್ಮ ಕಳೆದು ಹೋದ ಕಾಲದ ನೆನಪಾಯ್ತು ಎನ್ನುತ್ತಾರೆ ಅಲ್ಲಿದ್ದ ಹಿರಿಯ ಎಲ್ಯಣ್ಣ ಗೌಡ. ಸಣ್ಣ ಮಕ್ಕಳಂತೂ ಆ ತಿಂಡಿಗಳನ್ನೆಲ್ಲಾ ನೋಡಿ ಅದೇನು ಇದೇನು ಎಂದು ಪ್ರಶ್ನಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಜಂಕ್ ಫುಡ್, ಫಾಸ್ಟ್ ಫುಡ್‌ಗಳ ಮೊರೆ ಹೋಗುವ ಯುವ ಜನತೆಗೆ ಅಲ್ಲಿದ್ದ ಪ್ರತಿಯೊಂದು ತಿಂಡಿಯೂ ಮೂಗಿನ ಮೇಲೆ ಬೆರಳಿಡುವಂತಿತ್ತು. ಫಾಸ್ಟ್ ಫುಡ್ ಎಂದರೆ ಪ್ರಾಣ ಬಿಡುವ ಯುವಜನತೆ ಮನೆ ಅಡುಗೆ ಇಷ್ಟು ಚೆನ್ನಾಗಿರುತ್ತಾ? ಎಂದು ಮೂಗಿನ ಮೇಲೆ ಬೆರಳಿಡುತ್ತಿದ್ದರು.
ಪಾಡ್ದನ: ತಿಂಡಿ ತಿನ್ನುವಾಗ ತುಳುನಾಡಿನ ಪಾಡ್ದನ ಕೇಳುವ ಅವಕಾಶವೂ ಅಲ್ಲಿದೆ. ಅಪ್ಪಿ, ಶಾರದಕ್ಕ ಸಂಗಡಿಗರು ಅಲ್ಲಿ ಪಾಡ್ದನಹೇಳುತ್ತಿದ್ದರು. ಅಲ್ಲಿನ ವಾತಾವರಣವೇ ತುಳುವರನ್ನು ಪುಳಕಿತರನ್ನಾಗಿಸುತ್ತಿವೆ.